ತಾವು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವ ವೇಳೆ ನಾಯಕರು ನೀಡಿದ ಭರವಸೆಯಂತೆ ವಿಧಾನ ಪರಿಷತ್ ಸಭಾಪತಿ ಸ್ಥಾನ ನೀಡಲು ಈಗ ಹಿಂದೇಟು ಹಾಕುತ್ತಿರುವ ಕಾರಣ ಬಸವರಾಜ ಹೊರಟ್ಟಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ಬಸವರಾಜ್ ಹೊರಟ್ಟಿ, ತಮ್ಮ ಅಸಮಾಧಾನ ಹೊರ ಹಾಕಿದ್ದು, ಆದರೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲವೆಂದು ಹೇಳಲಾಗಿದೆ.
ಈ ಹಿಂದೆ ನಡೆದ ಮಾತುಕತೆಯಂತೆ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವ ಸಲುವಾಗಿ ಸೆಪ್ಟೆಂಬರ್ 21ರಂದು ಚುನಾವಣೆ ನಡೆಸಲು ಕೋರಿ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿತ್ತು.
ಆದರೆ ಇದರ ಮಧ್ಯೆ ಸಭೆ ನಡೆಸಿದ್ದ ಬಿಜೆಪಿಯ ಕೆಲವು ಹಿರಿಯ ಶಾಸಕರು, ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದಿರುವ ಬಸವರಾಜ್ ಹೊರಟ್ಟಿಯವರಿಗೆ ಆ ಸ್ಥಾನ ನೀಡುವುದು ಬೇಡ. ಪಕ್ಷದ ನಿಷ್ಠಾವಂತರನ್ನು ಪರಿಗಣಿಸಿ ಎಂದು ಆಗ್ರಹಿಸಿದ್ದರು.
ಹೀಗಾಗಿ ಸಭಾಪತಿ ಚುನಾವಣೆ ನಡೆಸುವ ಪ್ರಸ್ತಾವದಿಂದ ಸರ್ಕಾರ ಹಿಂದೆ ಸರಿದಿದ್ದು, ಬಸವರಾಜ್ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಸಿಗುವುದು ಅನುಮಾನವೆಂದು ಹೇಳಲಾಗಿದೆ.