ಬೆಳಗಾವಿ: ವಿದ್ಯುತ್ ದರ ಇಳಿಸದಿದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ರಾಜ್ಯ ಸರ್ಕಾರಕ್ಕೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಮಹಾರಾಷ್ಟ್ರಕ್ಕೆ ಹೋಗಲು ಹತ್ತು ವರ್ಷ ಬೇಕು ಎಂದಿದ್ದಾರೆ.
ಕೈಗಾರಿಕೋದ್ಯಮಿಗಳ ಪ್ರತಿಭಟನೆಗೆ ಹಾಗೂ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಸಚಿವರು, ಒಂದು ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗುವುದಿಲ್ಲ. ಹತ್ತು ವರ್ಷವಾದರೂ ಬೇಕು. ತಕ್ಷಣ ಹೋಗೋಕೇ ಅದೇನು ಡಬ್ಬಾ ಅಂಗಡಿಯಾ? ಒಂದು ಕೈಗಾರಿಕೆ ಆಗಲು ಹತ್ತು ವರ್ಷ ಬೇಕಾಗುತ್ತದೆ. ಅದಕ್ಕೆ ಎಷ್ಟು ಶ್ರಮ ಬೇಕು? ಎಷ್ಟು ಖರ್ಚು, ಹಣ ಬೇಕು? ಹಾಗೆಲ್ಲ ಹೇಳಿದ ಮಾತ್ರಕ್ಕೆ ಕೈಗಾರಿಕೆಗಳು ತಕ್ಷಣ ವಲಸೆ ಹೋಗಲು ಆಗಲ್ಲ ಎಂದರು.
ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಸ್ಪಷ್ಟನೆ ಇಲ್ಲ. ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚು ಬರಲು ಕಾರಣವೇನು? ಎಂಬುದು ನಮಗೂ ಗೊತ್ತಿಲ್ಲ. ಶೇ.10ರಷ್ಟು ಮಾತ್ರ ಏರಿಕೆ ಮಾಡಿದ್ದಾರೆ. ಮೂರುಪಟ್ಟು ಏರಿಕೆಯಾಗಲು ಹೇಗೆ ಸಾಧ್ಯ? ಈ ಬಗ್ಗೆ ಮಾಹಿತಿ ಪಡೆದು ಸ್ಪಷ್ಟ ಪಡಿಸುತ್ತೇನೆ ಎಂದು ತಿಳಿಸಿದರು.