ತಿರುವನಂತಪುರಂ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಸಾಂಕ್ರಾಮಿಕ ರೋಗಭೀತಿ ಹೆಚ್ಚಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಈತ ಜುಲೈ 27ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಲಾಗಿತ್ತು.
ಸೋಂಕಿತ ವ್ಯಕ್ತಿ ಯುಎಇ ಯಿಂದ ಕೇರಳಕ್ಕೆ ಆಗಮಿಸಿದ್ದರು. ಪ್ರಸ್ತುತ ಮಲಪ್ಪುರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಇದು ಕೇರಳದಲ್ಲಿ ಪತ್ತೆಯಾಗಿರುವ 5ನೇ ಮಂಕಿಪಾಕ್ಸ್ ಪ್ರಕರಣವಾಗಿದೆ.