ಶಿವಮೊಗ್ಗ: ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸುತ್ತಿರುವುದು ಸರಿಯಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಹೊಂದಾಣಿಕೆ ಇರಬೇಕು. ಆದರೆ ಕೇಂದ್ರ ಸರ್ಕಾರ ಮಾನವೀಯತೆ ಮರೆತಿದೆ ಎಂದು ಗುಡುಗಿದರು.
ನಾವು ಬೇರೆ ಯಾವುದೇ ಬ್ಯುಸಿನೆಸ್ ಮಾಡ್ತಿಲ್ಲ. ಕೇಂದ್ರಕ್ಕೆ 3 ಲಕ್ಷ ಕೋಟಿಯಷ್ಟು ಜಿ ಎಸ್ ಟಿ ರಾಜ್ಯದಿಂದಲೇ ಹೋಗುತ್ತದೆ. ಆದರೆ ಕೇಂದ್ರ ನಮಗೆ 50-60 ಸಾವಿರ ಕೋಟಿ ಕೊಡುತ್ತಿದೆಯಷ್ಟೇ. ಬಿಜೆಪಿ ನಾಯಕರು ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.