2 ವರ್ಷಗಳ ಹಿಂದೆ ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತದ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶಕ್ಕೆ ವಾಪಾಸ್ ಮರಳಿದ್ದರು. ಜೊತೆಗೆ ಇಲ್ಲಿಂದಲೇ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದರು.
ಈಗ ಕೊರೊನಾ ಸ್ವಲ್ಪ ಕಡಿಮೆಯಾಗಿದ್ದು, ಚೀನಾದ ಕೆಲವು ಪ್ರದೇಶಗಳಲ್ಲಿ ಆಫ್ಲೈನ್ ತರಗತಿಗಳು ಆರಂಭವಾಗಿವೆ. ಆದರೆ ಚೀನಾ ಸರ್ಕಾರ ತನ್ನ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಮೀನಾಮೇಷ ಎಣಿಸುತ್ತಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಲವು ಬಾರಿ ಮನವಿ ಮಾಡಿತ್ತಾದರೂ ಇದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಭಾರತ ಸರ್ಕಾರ ಚೀನಾದ ಪ್ರವಾಸಿ ವೀಸಾದ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇದೀಗ ಭಾರತದ ಒತ್ತಡಕ್ಕೆ ಮಣಿದಿರುವ ಚೀನಾ ಸರ್ಕಾರ, ಎರಡು ವರ್ಷಗಳ ಬಳಿಕ ತನ್ನ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ತೀರ್ಮಾನಿಸಿದೆ.