ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದ್ದು, ಈ ಕುರಿತ ಅಧಿಸೂಚನೆ ಹೊರಬಿದ್ದಿದೆ. ಇದರ ಬೆನ್ನಲ್ಲೇ ತಮಿಳುನಾಡು ಹಾಗೂ ಕೇರಳ ಸರ್ಕಾರಗಳೂ ಕೂಡ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿವೆ.
ಈ ಕುರಿತ ತಮಿಳುನಾಡು ಹಾಗೂ ಕೇರಳ ಸರ್ಕಾರಗಳ ಆದೇಶದ ಪ್ರತಿಯನ್ನು ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕೋಮು ದ್ವೇಷ ಹರಡಲು ಈ ಸಂಘಟನೆಗಳು ಯತ್ನಿಸಿದ್ದವು ಎಂಬುದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ಮೇಲೆ ನಿಷೇಧ ಹೇರಿತ್ತು.
2006 ರಲ್ಲಿ ಆರಂಭವಾದ ಪಿಎಫ್ಐ ಸಂಘಟನೆ ನಂತರದ ದಿನಗಳಲ್ಲಿ ಕೋಮು ಗಲಭೆ ನಡೆದ ವೇಳೆ ಈ ಸಂಘಟನೆಯ ಕಾರ್ಯಕರ್ತರ ಹೆಸರುಗಳು ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ವಿವಿಧ ರಾಜ್ಯಗಳಲ್ಲಿದ್ದ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈಗ ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.