ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಕೆಲ ಹಿರಿಯ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕದ ಇಬ್ಬರು ಅಥವಾ ಮೂವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಸಂಸದ ಎ. ನಾರಾಯಣಸ್ವಾಮಿ ತಮ್ಮ ಕುಟುಂಬದೊಂದಿಗೆ ನವದೆಹಲಿಗೆ ದೌಡಾಯಿಸಿದ್ದು, ಸಚಿವ ಸ್ಥಾನ ನೀಡುವ ಕುರಿತಂತೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ನಾರಾಯಣ ಸ್ವಾಮಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇದರ ಮಧ್ಯೆ ಇಂದು ಎ. ನಾರಾಯಣ ಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಇಬ್ಬರಿಗೂ ಸಚಿವ ಸ್ಥಾನ ಖಚಿತವೆಂದು ಹೇಳಲಾಗುತ್ತಿದೆ.
ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಹಾಲಿ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೊಕ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶೋಭಾ ಕರಂದ್ಲಾಜೆ ಹಾಗೂ ಡಿ.ವಿ. ಸದಾನಂದ ಗೌಡ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶವೆಂಬ ಕಾರಣಕ್ಕೆ ಬಿಜೆಪಿ ವರಿಷ್ಟರು ಈ ನಿರ್ಧಾರ ಕೈಗೊಳ್ಳಲಿದ್ದಾರೆನ್ನಲಾಗುತ್ತಿದೆ.