ರಾಮನಗರ: ರಾಮನಗರ ಕೆರೆ ಒಡೆದು ಬೆಂಗಳೂರು-ಮೈಸೂರು ಹೆದ್ದಾರಿ ಜಾಲಾವೃತಗೊಂಡು ಸಮಸ್ಯೆಯಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆರೆ ಒಡೆದು ಸಮಸ್ಯೆಯಾಗಿದ್ದಲ್ಲ, ಅವರು ಮಾಡಿದ ಹೆದ್ದಾರಿ ಕಳಪೆ ಕಾಮಗಾರಿ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಇನ್ನೊಂದೆಡೆ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡು ವಾಹನ ಸಂಚಾರ ಬಂದ್ ಆಗಿದೆ. ಹೆದ್ದಾರಿಯಲ್ಲಿ ಸಮಸ್ಯೆ ಎದುರಾಗಲು ಕೆರೆ ಕೋಡಿ ಒಡೆದದ್ದು ಕಾರಣ ಎಂದಿದ್ದ ಸಂಸದ ಪ್ರತಾಪ್ ಸಿಂಹ್ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಬರಿ ಫೋಟೋದಲ್ಲಿ ಪೋಸ್ ಕೊಡೋದಲ್ಲ, ವಾಸ್ತವಾಂಶವೇನು ಎಂಬುದನ್ನು ಬಂದು ನೋಡಲಿ. ಇವರ ಕಳಪೆ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಕೆರೆ ಒಡೆದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ ಎಂಬುದೆಲ್ಲ ಸುಳ್ಳು. ಮಳೆಯಿಂದಾಗಿ ಹೆದ್ದಾರಿ ಕಳಪೆ ಕಾಮಗಾರಿ ರಹಸ್ಯ ಬಹಿರಂಗವಾಗಿದೆ. ಗುಣಮಟ್ಟದ ಕಾಮಗಾರಿ ಬಣ್ಣ ಈಗ ಗೊತ್ತಾಗಿದೆ. ಪ್ರತಾಪ್ ಸಿಂಹ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಶೋಕಿ ಮಾಡುತ್ತಿದ್ದಾರೆ. ಸೋಸಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವುದಲ್ಲ, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿ. ಜಿಲ್ಲೆಯಲ್ಲಿ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಇಲ್ಲಿ ಬಂದು ಮಾತನಾಡಲಿ ಎಂದು ಆಗ್ರಹಿಸಿದರು.