ಇಂದು ರಾಜ್ಯದಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಆದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೆಡೆ ಹಬ್ಬದ ಸಡಗರಕ್ಕೆ ವರುಣ ಅಡ್ಡಿಯಾಗಿದ್ದಾನೆ. ಅದರಲ್ಲೂ ಬೆಂಗಳೂರಿನ ಕೆಲ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನವಿರಲಿ ನಡೆದಾಡಲು ಸಹ ಪರದಾಡುವಂತಾಗಿದೆ.
ಇನ್ನು ಬಡಾವಣೆಗಳಲ್ಲೂ ಮನೆಗಳಿಗೆ ನೀರು ನುಗ್ಗಿದ್ದು, ಮಹಾನಗರ ಪಾಲಿಕೆಯನ್ನು ಶಪಿಸುತ್ತಲೇ ಜನತೆ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ನೀರು ನುಗ್ಗಿರುವ ಪರಿಣಾಮ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳೆಲ್ಲ ಹಾಳಾಗಿವೆ. ರಾಜ ಕಾಲುವೆಯನ್ನು ಒತ್ತುವರಿ ಮಾಡಿರುವುದೇ ನೀರು ನಿಲ್ಲಲು ಕಾರಣವೆಂದು ಹೇಳಲಾಗಿದೆ.
ಇದರ ಮಧ್ಯೆ ಬೆಂಗಳೂರಿನ ರಸ್ತೆಗಳ ಸ್ಥಿತಿ ಕುರಿತ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಬಿಎಂಪಿಯನ್ನು ಲೇವಡಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಂಗಳೂರಿನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.