ಬಾದಾಮಿ: ಕೆರೂರು ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಲು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಪರಿಹಾರದ ಹಣ ಎಸೆದು ಗಾಯಾಳುಗಳ ಕುಟುಂಬದವರು, ನಮಗೆ ದುಡ್ದು ಬೇಡ ಶಾಂತಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಬಾದಾಮಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ 2 ಲಕ್ಷ ರೂಪಾಯಿ ಪರಿಹಾರ ಹಣ ನೀಡಿದ್ದಾರೆ.
ಈ ವೇಳೆ ನಮಗೆ ಹಣ ಬೇಡ, ಶಾಂತಿ ಬೇಕು ಎಂದು ಗಾಯಾಳು ಕುಟುಂಬದವರು ಕಣ್ಣೀರಿಟ್ಟಿದ್ದಾರೆ. ಪರಿಹಾರ ಹಣವನ್ನು ವಾಪಸ್ ಸಿದ್ದರಾಮಯ್ಯನವರಿಗೆ ಕೊಡಲೆಂದು ಸಿದ್ದರಾಮಯ್ಯ ಅವರ ಕಾರು ಹಿಂಬಾಲಿಸಿ ಬಂದ ಗಾಯಾಳು ಕುಟುಂಬದ ಮಹಿಳೆ ರಜ್ಮಾ, ಸಿದ್ದರಾಮಯ್ಯ ಅವರ ಕಾರಿನ ಮೇಲೆ 2 ಲಕ್ಷ ಪರಿಹಾರ ಹಣವನ್ನು ಎಸೆದು ಹಣ ಬೇಡ, ಶಾಂತಿ, ನೆಮ್ಮದಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೂರು ಗುಂಪು ಗರ್ಷಣೆಯಲ್ಲಿ ಮೊಹಮ್ಮದ್ ಹನೀಫ್, ದಾವಲ್ ಮಲಿಕ್, ರಾಜೇಸಾಬ್ ಹಾಗೂ ರಫೀಕ್ ಎಂಬ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದರಾಮಯ್ಯ ಇಂದು ಗಾಯಾಳುಗಳ ಆರೋಗ್ಯ ವಿಚಾರಿಸಿ ಬರುವಾಗ ಈ ಘಟನೆ ನಡೆದಿದೆ.