ಚಿಕ್ಕಮಗಳೂರು: ಈ ಬಾರಿ ಬಹಳ ತಾಳ್ಮೆಯಿಂದ ಚುನಾವಣೆ ಮಾಡಬೇಕು ಎಂದುಕೊಂಡಿದ್ದೇನೆ. ಬೇರೆ ಯಾವುದೇ ವಿಚಾರಗಳಿಗೂ ಪ್ರತಿಕ್ರಿಯೆ ಕೊಡಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೆಟ್ಟದ್ದನ್ನು ಕೇಳಲ್ಲ, ಕೆಟ್ಟದ್ದನ್ನು ಮಾಡಲ್ಲ. ತಾಳ್ಮೆಯಿಂದ ಚುನಾವಣೆ ಮಾಡುತ್ತೇನೆ. ನಾನು ಮಾಡಿದ ಅಭಿವೃದ್ಧಿ ಕೆಲಸದಿಂದ ಚುನಾವಣೆಯಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಮಹಿಳೆಯರ ಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಹಾಗಾಗಿ ಮೂರು ತಿಂಗಳು ತಾಳ್ಮೆಯಿಂದ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟವಿದೆ. ಹಂತ ಹಂತದಲ್ಲಿಯೂ ಮಹಿಳೆಯರು ಅಗ್ನಿ ಪರೀಕ್ಷೆ ಎದುರಿಸಬೇಕು. ಸೀತಾ ಮಾತೆ ಕೂಡ ಅಗ್ನಿ ಪರೀಕ್ಷೆ ತಪ್ಪಿಸಿಕೊಳ್ಳಲಾಗಿಲ್ಲ. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ. ಮಹಿಳೆ ಎಂದರೆ ಹುಟ್ಟಿನಿಂದ ಸಾಯುವವರೆಗೂ ಪರೀಕ್ಷೆಗಳನ್ನು ಹೊತ್ತುಕೊಂಡೇ ಇರಬೇಕು, ಎದುರಿಸಿ ಪಾಸಾಗಬೇಕು ಎಂದು ಹೇಳಿದರು.