ಬೆಂಗಳೂರು: ಕೆಜಿಎಫ್ ಬಾಬು ನಿವಾಸ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸದ ಮೇಲೆ ಬೆಳಿಗ್ಗೆ 7 ಗಂಟೆಗೆ ನಾಲ್ಕು ಇನೋವಾ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಬು ಒಡೆತನದ ರುಕ್ಸಾನಾ ಪ್ಯಾಲೇಸ್ ಮೇಲೂ ದಾಳಿ ನಡೆಸಲಾಗಿದೆ.
ಸಿ ಆರ್ ಪಿ ಎಸ್ ಭದ್ರತೆಯಲ್ಲಿ ಐಟಿ ಶೋಧ ನಡೆಸಲಾಗಿದೆ. ಸ್ಕ್ರಾಪ್ ಉದ್ಯಮದಲ್ಲಿ ಹೆಸರುಗಳಿಸಿದ್ದ ಕೆಜಿಎಫ್ ಬಾಬು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
2023ರ ವಿಧಾನಸಭಾ ಚುನಾವಣೆಯ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿಎಫ್ ಬಾಬು ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಉಮ್ರಾ ಡೆವಲಪರ್ಸ್ ಕಂಪನಿ ಮಾಲೀಕರಾಗಿರುವ ಬಾಬು ಸ್ಕ್ರಾಪ್ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದಾರೆ.