ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ರಾಜ್ಯ ಸರ್ಕಾರ ಆಹ್ವಾನಿಸದ ಹಿನ್ನೆಲೆಯಲ್ಲಿ ಸರ್ಕಾರದ ನಡೆ ವಿರುದ್ಧ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ದೇವನಹಳ್ಳಿ ಏರ್ ಪೋರ್ಟ್ ಬಳಿ ಕೆಂಪೇಗೌಡರ ಬೃಹತ್ ಪ್ರತಿಮೆ ಬಳಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಶಾಸಕ ಶರವಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ನಾಯಕ ಶರವಣ, ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿಯವರನ್ನು ಸರ್ಕಾರ ಆಹ್ವಾನಿಸಿಲ್ಲ. ಶಿಷ್ಟಾಚಾರ ಪಾಲನೆ ಸರ್ಕಾರಕ್ಕೆ ಗೊತ್ತಿಲ್ಲವೇ? ಉದ್ದೇಶ ಪೂರ್ವಕವಾಗಿ ಬಿಜೆಪಿ ನಾಯಕರು ಕಾಟಾಚಾರಕ್ಕಾಗಿ ಆಹ್ವಾನಿಸುವಂತೆ ಆಮಂತ್ರಣ ಪತ್ರವನ್ನು ಗೇಟ್ ಬಳಿ ಸೆಕ್ಯುರಿಟಿಗೆ ಕೊಟ್ಟು ಹೋಗಿದ್ದಾರೆ. ಅದು ಬೆಳಿಗ್ಗೆ ಕಾರ್ಯಕ್ರಮ ಅಂದರೆ ರಾತ್ರಿ 12:30ಕ್ಕೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಲವು ತಿಂಗಳ ಹಿಂದೆಯೇ ನಿಗದಿ ಪಡಿಸಿದೆ. ಹೀಗಿರುವಾಗ ಮಾಜಿ ಪ್ರಧಾನಿಯವರಿಗೆ ಆಹ್ವಾನ ನೀಡಲು ಇವರಿಗೆ ಸಮಯವಿರಲಿಲ್ಲವೇ? ಮಧ್ಯರಾತ್ರಿ 12:30ಕ್ಕೆ ಸರ್ಕಾರದ ವತಿಯಿಂದ ವಾಹನದ ಡ್ರೈವರ್ ಒಬ್ಬರು ದೇವೇಗೌಡರ ಮನೆ ಬಳಿ ಬಂದು ಗೇಟ್ ಬಳಿ ಇರುವ ಸೆಕ್ಯೂರಿಟಿ ಕೈಗೆ ಆಹ್ವಾನ ಪತ್ರವನ್ನು ನೀಡಿ ಹೋಗುತ್ತಾನೆ. ಇದು ಮಾಜಿ ಪ್ರಧಾನಿಯೊಬ್ಬರನ್ನು ಸರ್ಕಾರ ಕಾರ್ಯಕ್ರಮಕ್ಕೆ ಆಹ್ವಾನಿಸುವ ರೀತಿಯೇ? ಎಂದು ಪ್ರಶ್ನಿಸಿದರು.
ನಮ್ಮಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಕರೆಯಲೂ ಶಿಷ್ಟಾಚಾರ ಇರುತ್ತೆ ಅದನ್ನು ಪಾಲಿಸುತ್ತೇವೆ. ಅಂತದ್ದರಲ್ಲಿ ದೇವೇಗೌಡರು ಮಾಜಿ ಪ್ರಧಾನಿಗಳು. ರಾಜ್ಯಕ್ಕೆ ದೇಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ನಮ್ಮ ರಾಜ್ಯದ ನಾಯಕರಾಗಿರುವ ಮಾಜಿ ಪ್ರಧಾನಿಯವರನ್ನು ಸರ್ಕಾರ ಕರೆಯುವ ರೀತಿ ಇದೇನಾ? ಸರ್ಕಾರಕ್ಕೆ ಒಂದು ಶಿಷ್ಟಾಚಾರವಿಲ್ಲವೇ? ಬಿಜೆಪಿ ನಾಯಕರ ಧೋರಣೆ ಎಂಥಾದ್ದು? ಸರ್ಕಾರ ಈ ಬಗ್ಗೆ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.