ಬೆಂಗಳೂರು: ಕೆಂಪಣ್ಣ ಮಾಡುತ್ತಿರುವ ಆರೋಪ ಸುಳ್ಳು. ಕಳೆದ 14 ತಿಂಗಳಿಂದ ಕೆಂಪಣ್ಣ ಯಾವುದೇ ದಾಖಲೆಗಳನ್ನು ನೀಡದೇ ಕೇವಲ ಆರೋಪಗಳನ್ನು ಮಾಡುತ್ತಾ ಪ್ರಧಾನಮಂತ್ರಿಗಳಿಗೂ ಪತ್ರ ಬರೆದಿದ್ದಾರೆ. ಕೆಂಪಣ್ಣ ಅವರ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
ನನ್ನ ವಿರುದ್ಧ ಕೆಂಪಣ್ಣ ಮಾಡಿರುವ ಆರೋಪದಿಂದ ನೋವಾಗಿದೆ. ಈ ಬಗ್ಗೆ ಇಡೀ ಗುತ್ತಿಗೆದಾರರ ಸಂಘದ ಮೇಲೆ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸಿದ್ದೇನೆ. ಸಂಘದ ಎಲ್ಲರ ಮೇಲೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಗುಡುಗಿದರು.
ಎಲ್ಲಾ ಸಚಿವರು ಭ್ರಷ್ಟರು ಎಂದು ಹೇಳುತ್ತಿದ್ದಾರೆ. ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ 7 ದಿನಗಳ ಒಳಗಾಗಿ ಸಲ್ಲಿಸಲಿ. ಇಲ್ಲವಾದಲ್ಲಿ 7 ದಿನಗಳ ಒಳಗೆ ಕ್ಷಮೆ ಯಾಚಿಸಲಿ. ಇಲ್ಲವಾದಲ್ಲಿ ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.
ಗುತ್ತಿಗೆದಾರರ ಸಂಘಕ್ಕೆ ಯಾವುದೇ ಚುನಾವಣೆ ಇಲ್ಲ, ಸಂಘದ ಅಧ್ಯಕ್ಷರಾಗಲು ಹಲವು ವಿಚಾರಗಳು ಗೊತ್ತಿರಬೇಕು. ಕೆಂಪಣ್ಣ ಗುತ್ತಿಗೆ ಮಾಡಿ ಎಷ್ಟು ವರ್ಷ ಆಗಿದೆ ಗೊತ್ತಿಲ್ಲ. ಸಂಘವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. 40% ಕಮಿಷನ್ ಯಾರು ಕೇಳುತ್ತಿದ್ದಾರೆ? ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ವಿಪಕ್ಷಗಳ ಜತೆ ಸೇರಿ ಅನಗತ್ಯ ಆರೋಪ ಮಾಡುತ್ತಿದ್ದಾರೆ, ಪ್ರಧಾನಿಗಳಿಗೂ ಪತ್ರ ಬರೆದಿದ್ದಾರೆ. ಆರೋಪ ಮಾಡುವ ಮೊದಲು ದಾಖಲೆ ಸಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು.