ರೈತರ ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ. ಇದರ ಅನುಷ್ಠಾನ ಪ್ರಕ್ರಿಯೆಯು ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದೆ.
ಈ ಸಂಬಂಧ ಅವಶ್ಯವಿರುವ ಸಾಫ್ಟ್ವೇರ್ಗಳ ಅಭಿವೃದ್ಧಿಗಾಗಿ ಕಂಪನಿಯನ್ನು ಅಂತಿಮಗೊಳಿಸುವಲ್ಲಿ ಸರ್ಕಾರವು ಮಗ್ನವಾಗಿದೆ. ಅಲ್ಲದೇ ಈ ಡಿಜಿಟಲೀಕರಣ ಈ ವರ್ಷದ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ರಾಜ್ಯ ಸರ್ಕಾರವು 50 ಕೋಟಿವರೆಗೆ ವ್ಯಯಿಸಬೇಕಿದ್ದು ಉಳಿದ ಮೊತ್ತವನ್ನು ಕೇಂದ್ರ, ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ಗಳಿಂದ ಪಡೆಯಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಸುಮಾರು 5,400 ಪಿಎಸಿಎಸ್‌ಗಳಿವೆ. ಇವುಗಳ ಡಿಜಿಟಲೀಕರಣವು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ. ಕೇಂದ್ರವು 60% ಪಾವತಿ ಮಾಡುತ್ತದೆ. ಉಳಿದ 40% ದಲ್ಲಿ ರಾಜ್ಯ ಸರ್ಕಾರವು 20% ಪಾವತಿ ಮಾಡುತ್ತದೆ, ಆದರೆ ಅಪೆಕ್ಸ್ ಬ್ಯಾಂಕ್ 10% ಮತ್ತು DCC ಬ್ಯಾಂಕ್ಗಳು 10% ಪಾವತಿಸುತ್ತವೆ.