ಏರ್ ಇಂಡಿಯಾ ಮತ್ತು ನೇಪಾಳ ಏರ್ ಲೈನ್ಸ್ ವಿಮಾನಗಳು ಆಗಸದಲ್ಲಿ ಬಹುತೇಕ ಘರ್ಷಣೆಗೆ ಒಳಗಾಗಬಹುದಾಗಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ಘಟನೆಯಲ್ಲಿ ಅಜಾಗರೂಕತೆ ತೋರಿದ ಏರ್ ಟ್ರಾಫಿಕ್ ಕಂಟ್ರೋಲರ್ ವಿಭಾಗದ ಮೂವರು ಉದ್ಯೋಗಿಗಳನ್ನು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ಅಮಾನತುಗೊಳಿಸಿದೆ. ಆ ಬಗ್ಗೆ ಸಿಎಎಎನ್ ವಕ್ತಾರ ಜಗನ್ನಾಥ್ ನಿರೋಲಾ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮಲೇಷ್ಯಾದ ಕೌಲಾಲಂಪುರದಿಂದ ಕಠ್ಮಂಡುವಿಗೆ ಬರುತ್ತಿದ್ದ ನೇಪಾಳ ಏರ್‌ಲೈನ್ಸ್‌ನ ಏರ್‌ಬಸ್ ಎ-320 ವಿಮಾನ ಮತ್ತು ನವದೆಹಲಿಯಿಂದ ಕಠ್ಮಂಡುವಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಬಹುತೇಕ ಘರ್ಷಣೆಗೆ ಒಳಗಾಗಲಿದ್ದವು.
ಏರ್ ಇಂಡಿಯಾ ವಿಮಾನವು 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನವು ಅದೇ ಸ್ಥಳದಲ್ಲಿ 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ನಿರೋಲಾ ಹೇಳಿದರು.
ಎರಡು ವಿಮಾನಗಳು ಸಾಮೀಪ್ಯದಲ್ಲಿವೆ ಎಂದು ರಾಡಾರ್‌ನಲ್ಲಿ ತೋರಿಸಿದ ನಂತರ, ನೇಪಾಳ ಏರ್‌ಲೈನ್ಸ್ ವಿಮಾನವು 7,000 ಅಡಿಗಳಿಗೆ ಇಳಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ಪ್ರಾಧಿಕಾರವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.
ಘಟನೆಯ ಸಮಯದಲ್ಲಿ ನಿಯಂತ್ರಣ ಕೊಠಡಿಯ ಉಸ್ತುವಾರಿ ವಹಿಸಿದ್ದ ಮೂವರು ಅಧಿಕಾರಿಗಳನ್ನು ಸಿಎಎಎನ್ ಅಮಾನತುಗೊಳಿಸಿದೆ.
ಏರ್ ಇಂಡಿಯಾದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.