ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದು, ಮತ್ತೊಂದು ಪಕ್ಷ ಸೇರ್ಪಡೆಯಾಗಲು ತಯಾರಿ ನಡೆಸಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಬಹುತೇಕ ನಿಶ್ಚಿತವಾಗಿದ್ದು, ಶುಕ್ರವಾರದಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಈ ಭೇಟಿ ನಡೆದಿದ್ದು, ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಸೆಡ್ಡು ಹೊಡೆಯುವಂತೆ ಬೃಹತ್ ಸಮಾವೇಶ ಏರ್ಪಡಿಸಿ ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಶಿವಲಿಂಗೇಗೌಡ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಜೊತೆ ಅವರು ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದ ಟಿಕೆಟ್ ಅನ್ನು ಶಿವಲಿಂಗೇಗೌಡ ಅವರಿಗೇ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅಧಿವೇಶನ ಮುಗಿದ ಬಳಿಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.