ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿದ್ದು, ಕಾಂಗ್ರೆಸ್ ಪಕ್ಷವನ್ನು ಮತ್ತೆ ಪುನರುಜ್ಜೀವಗೊಳಿಸಲು ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಲವು ಷರತ್ತುಗಳೊಂದಿಗೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮಕ್ಕೆ ಅನುಮೋದನೆ ನೀಡಲಾಗಿದೆ. ಅದೇ ಕುಟುಂಬದ ಇನ್ನೋರ್ವ ಸದಸ್ಯ 5 ವರ್ಷ ಪಕ್ಷಕ್ಕಾಗಿ ದುಡಿದಿದ್ದರೆ ಟಿಕೆಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಈ ಮೂಲಕ ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ ನಲ್ಲಿ ಬ್ರೇಕ್ ಹಾಕಲು ಚಿಂತನೆ ನಡೆದಿದೆ.
ಪಕ್ಷದ ಪದಾಧಿಕಾರಿಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೂ ಕೋಕ್ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. 70 ವರ್ಷ ಮೇಲ್ಪಟ್ಟವರು ಕಾಂಗ್ರೆಸ್ ಸಲಹಾ ಸಮಿತಿಯಲ್ಲಿ ಕೆಲಸ ಮಾಡಲಿ. ಪಕ್ಷದಲ್ಲಿ ಶೇ.50ರಷ್ಟು ಯುವಕರಿಗೆ ಹಾಗೂ ಹೊಸಬರಿಗೆ ಆದ್ಯತೆ ನೀಡಬೇಕು ಎಂದು ಸಂಘಟನಾ ಸಮಿತಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ನೀಡಿದೆ ಎಂದು ತಿಳಿದುಬಂದಿದೆ.