ಬೆಂಗಳೂರು: ಪೊಲೀಸ್ ಇಲಾಖೆ ನೇಮಕಾತಿ, ವರ್ಗಾವಣೆ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಸು ಕೊಟ್ಟವರೇ ಪೊಲೀಸ್ ಇಲಾಖೆಯಲ್ಲಿ ಬಾಸು ಎಂಬಂತಾಗಿದೆ ಎಂದು ಆರೋಪಿಸಿದರು.
ಕಾಸು ಕೊಟ್ಟವರೇ ಪೊಲೀಸ್ ಇಲಾಖೆಯಲ್ಲಿ ಬಾಸು ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ನೀವಾಗಲಿ, ನಿಮ್ಮ ಸಿಎಂ ಆಗಲಿ ಇದನ್ನು ಇಲ್ಲಿಯವರೆಗೆ ಅಲ್ಲಗಳೆದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಚಲಿಸುತ್ತಿದ್ದ ಬಸ್ನಲ್ಲಿ ಶಾಲಾ ಸಹಪಾಠಿಗಳ ಎಣ್ಣೆ ಪಾರ್ಟಿ : ವಿಡಿಯೋ ವೈರಲ್ ಬಳಿಕ ಖಾಕಿ ಅಲರ್ಟ್
ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ, ನಾನು ಅಲ್ಲಗಳೆಯಲ್ಲ, ಆದ್ರೆ ಯಾವಾಗಿನಿಂದ ಆರಂಭವಾಗಿದೆ ಎಂಬುದು ಮುಖ್ಯ. ನಿಮ್ಮ ಸರ್ಕಾರದ ಅವಧಿಯಿಂದಲೇ ಪ್ರಾರಂಭವಾದದ್ದು. ಏಜೆಂಟ್ ನ ಇಟ್ಟುಕೊಂಡಿದ್ರು, ನಾವು ಅವರನ್ನು ಹತ್ತಿರಕ್ಕೂ ಸೇರಿಸಿಲ್ಲ ಎಂದರು. ಗೃಹ ಸಚಿವರ ಹೇಳಿಕೆಗೆ ಕೆಂಡ ಕಾರಿದ ಸಿದ್ದರಾಮಯ್ಯ, ನಿಮ್ಮ ಸರ್ಕಾರದ ಅವಧಿಯಲ್ಲಿಯೂ ಇತ್ತು, ಅದಕ್ಕೆ ನಾವು ಮಾಡುತ್ತಿದ್ದೇವೆ ಎಂದು ಹೇಳುವುದು ಉತ್ತರವೇ? ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದರೆ ಅದರ ವಿರುದ್ಧ ಏನು ಕ್ರಮ ಎಂಬುದನ್ನು ಸ್ಪಷ್ಟಪಡಿಸುವುದು ಬಿಟ್ಟು ನಿಮ್ಮ ಕಾಲದಲ್ಲೂ ಇತ್ತು ಈಗಲೂ ಮುಂದುವರೆಸಿದ್ದೇವೆ ಎಂದು ಹೇಳಿಕೆ ನೀಡುವುದು ಇಂದೆಂಥಹ ಸರ್ಕಾರ ಎಂದು ಗುಡುಗಿದರು.
ಅಷ್ಟಕ್ಕೂ ಸುಮ್ಮನಾಗದ ಗೃಹ ಸಚಿವ ಅರಗ ಜ್ಞಾನೇಂದ್ರ ’ಹಳೆ ಕುದುರೆ ಹೊಸ ಸವಾರ’ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕಿಡಿಕಾರಿದ ಸಿದ್ದರಾಮಯ್ಯ”ಕೊಟ್ಟ ಕುದುರೆಯನ್ನು ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂದು ಅಲ್ಲಮಪ್ರಭು ವಚನವನ್ನು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.