ಬರೋಬ್ಬರಿ ಮೂರು ದಶಕಗಳ ನಂತರ ಕಾಶ್ಮೀರದ ಯುವ ಜನತೆಗೆ ಮನರಂಜನೆಯ ಅವಕಾಶ ದೊರೆಯುತ್ತಿದೆ. ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್ ಸಿನೆಮಾ ತಲೆಯೆತ್ತುತ್ತಿದೆ. ಕಣಿವೆಯ ನಿವಾಸಿಗಳಿಗೆ ಉದ್ಯೋಗಾವಕಾಶದ ಜೊತೆಗೆ ಮನರಂಜನೆಯ ಬಾಗಿಲು ಸಹ ತೆರೆಯುತ್ತಿರುವುದು ವಿಶೇಷ.
ಕಾಶ್ಮೀರ ಗಡಿಯಲ್ಲಿ ಉಗ್ರರ ಉಪಟಳ ಜೋರಾಗಿತ್ತು. ಭಯೋತ್ಪಾದಕ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದಿದ್ದರಿಂದ 1990ರಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಮೂರು ವರ್ಷಗಳ ಹಿಂದಷ್ಟೆ ಆರ್ಟಿಕಲ್ 370 ರದ್ದಾಗಿತ್ತು. ಇದೀಗ ಥಿಯೇಟರ್‌ಗಳು ಕಾರ್ಯಾರಂಭ ಮಾಡುತ್ತಿವೆ.
ಐನಾಕ್ಸ್ ವಿನ್ಯಾಸಗೊಳಿಸಿರುವ ಈ ಮಲ್ಟಿಪ್ಲೆಕ್ಸ್ ಸಪ್ಟೆಂಬರ್‌ನಲ್ಲಿ ಓಪನ್ ಆಗಲಿದೆ. ಇಲ್ಲಿ ಮೂರು ಆಡಿಟೋರಿಯಂಗಳಿದ್ದು, ವಿಶೇಷ ಸೌಂಡ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಆರಾಮದಾಯಕ ಆಸನದ ವ್ಯವಸ್ಥೆಯೂ ಇರಲಿದೆ.
ರಿಕ್ಲೈನರ್‌ಗಳು ಹಾಗೂ ಸಾಮಾನ್ಯ ಆಸನಗಳೆರಡೂ ಇಲ್ಲಿವೆ. ಭಾರತದ ಇತರ ನಗರಗಳಲ್ಲಿ ಯುವಜನತೆಗೆ ಸಿಗುತ್ತಿರುವ ಸೌಲಭ್ಯಗಳು ಕಾಶ್ಮೀರದಲ್ಲೂ ಸಿಗಬೇಕು ಎಂಬ ಕಾರಣಕ್ಕೆ ಈ ಮಲ್ಟಿಪ್ಲೆಕ್ಸ್ ತೆರೆಯುತ್ತಿರುವುದಾಗಿ ಐನಾಕ್ಸ್ ಹೇಳಿದೆ.
ಇಲ್ಲಿ 520 ಆಸನದ ವ್ಯವಸ್ಥೆ ಇದೆ. ಫುಡ್ ಕೋರ್ಟ್ ಸಹ ಆರಂಭವಾಗಲಿದೆ. ಮಕ್ಕಳಿಗೆ ಪ್ರಮುಖ ಆಕರ್ಷಣೆಯಾದ ಪ್ಲೇ ಏರಿಯಾಗಳು ಕೂಡ ಇರಲಿವೆ.