ಉಡುಪಿ: ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಅರಿಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಯುವಕನ ಮೃತದೇಹ ಒಂದು ವಾರದ ಬಳಿಕ ಪತ್ತೆಯಾಗಿದೆ.
ಕೊಲ್ಲೂರಿನ ಅರಿಶಿನಗುಂಡಿ ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಭದ್ರಾವತಿ ಮೂಲದ ಯುವಕ ಶರತ್, ಭಾರಿ ಮಳೆಗೆ ಏಕಾಏಕಿ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ. ಈ ಭೀಕರ ದೃಶ್ಯ ಆತನ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿತ್ತು.
ಜುಲೈ 23ರಂದು ಈ ದುರಂತ ಸಂಭವಿಸಿತ್ತು. ಜಲಪಾತದಲ್ಲಿ ಬಿದ್ದಿದ್ದ ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದರು. ಆದರೆ ಈವರೆಗೂ ಆತನ ಸುಳಿವಿರಲಿಲ್ಲ. ಇದೀಗ ಅರಿಶಿನಗುಂಡಿ ಫಾಲ್ಸ್ ನಲ್ಲಿಯೇ ಯುವಕನ ಮೃತದೇಹ ಪತ್ತೆಯಾಗಿದೆ.
ಫಾಲ್ಸ್ ನ ಸುಮಾರು 200 ಮೀಟರ್ ಆಳದಲ್ಲಿ ಬಂಡೆಕಲ್ಲಿನ ಕೆಳಗೆ ಶರತ್ ಮೃತದೇಹ ಸಿಲುಕಿಕೊಂಡಿತ್ತು. ಯುವಕನ ಮೃತದೇಹವನ್ನು ಸಧ್ಯ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.