ಬೆಂಗಳೂರು: ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ತೆರಳಿದ್ದಾರೆ. ಆದರೆ ಅವರ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಲು, ಪ್ರತಿಭಟನೆ ಮೂಲಕ ತಡೆಯುವುದು ಎಷ್ಟು ಸರಿ ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಅವರ ಸಚಿವರೇ ಹೇಳುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ಕಣ್ಣು ತೆರೆಸಲು ನೆರೆ ಪ್ರದೇಶಕ್ಕೆ ವಿಪಕ್ಷ ನಾಯಕರು ಭೇಟಿ ನೀಡಿದರೆ, ಸರ್ಕಾರದ ಆಡಳಿತ ವೈಖರಿ ಬಗ್ಗೆ ಟೀಕಿಸಿದರೆ ಪ್ರತಿಭಟಿಸುವುದು ಯಾಕೆ? ನಮ್ಮ ಕಾರ್ಯಕರ್ತರು ನಿಮ್ಮ ಕಾರ್ಯಕ್ರಮಗಳನ್ನು ಪ್ರತಿಭಟಿಸಿದರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಬಹುದು? ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ. ಇಲ್ಲವಾದಲ್ಲಿ ನಮಗೆ ಬೇರೆ ದಾರಿ ಇಲ್ಲ. ನಿಮ್ಮ ಕಾರ್ಯಕ್ರಮಗಳಿಗೂ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ. ಹೇಳಿಕೆಗಳ ಬಗ್ಗೆ ಟೀಕೆ ಮಾಡುವುದು ಪ್ರಜಾಪ್ರಭುತ್ವದ ಭಾಗ. ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಖಂಡನೀಯ ಎಂದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತರು ಎಂಬ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಆರೋಪಕ್ಕೆ ಕಿಡಿ ಕಾರಿದ ಡಿ.ಕೆ. ಶಿವಕುಮಾರ್, ಮೊದಲು ಕೆ.ಜಿ.ಬೊಪಯ್ಯ ಅವರನ್ನು ಬಂಧಿಸಬೇಕು. ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ ಹಾಗೂ ಬಿಜೆಪಿ ಶಾಸಕರು. ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎಂದ ಮೇಲೆ ನಮ್ಮ ಕಾರ್ಯಕರ್ತರು ಎಸೆದಿದ್ದು ಅನ್ನಬೇಕು ಅದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರೇ ಮೊಟ್ಟೆ ಎಸೆದಿದ್ದಾರೆ ಎಂದು ಆರೋಪ ಮಾಡುವುದು ಹೇಡಿತನ ಎಂದು ಹೇಳಿದರು.