ರಸ್ತೆ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸ್ತಾ ಇದೆ.
ಕಾರು ತಯಾರಕರು ಹಿಂದಿನ ಸೀಟ್ ಬೆಲ್ಟ್‌ಗಳಿಗೆ ಅಲಾರಾಂ ಅಳವಡಿಸುವುದನ್ನು ಕಡ್ಡಾಯಗೊಳಿಸುವ ಕರಡು ನಿಯಮಗಳನ್ನು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಅಂತಿಮವಾಗಿ ಬಿಡುಗಡೆ ಮಾಡಿದೆ.
ಕರಡು ನಿಯಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಸಾರ್ವಜನಿಕರಿಗೂ ಅವಕಾಶ ನೀಡಿದ್ದು, ಅಕ್ಟೋಬರ್ 5 ಕೊನೆಯ ದಿನಾಂಕ. ಕಾರು ತಯಾರಕರು ಕಡ್ಡಾಯವಾಗಿ ಹಿಂಬದಿ ಸೀಟ್ ಬೆಲ್ಟ್ ನೀತಿಯನ್ನು ಪಾಲಿಸಲೇಬೇಕೆಂದು ಸರ್ಕಾರ ಕಟ್ಟಾಜ್ಞೆ ಮಾಡಿದೆ.
ಸೈರಸ್ ಮಿಸ್ತ್ರಿ ಅವರ ನಿಧನದ ಎರಡು ದಿನಗಳ ನಂತರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾರಿನಲ್ಲಿ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಘೋಷಿಸಿದ್ದರು. ಸೀಟ್ ಬೆಲ್ಟ್ ಧರಿಸದೇ ಇದ್ದರೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದರು.
ಮಹಾರಾಷ್ಟ್ರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ದುರ್ಮರಣಕ್ಕೀಡಾಗಿದ್ದರು. ಸ್ನೇಹಿತೆ ಡಾ.ಅನಹಿತಾ ಪುಂಡೋಲೆ, ಪತಿ ಡೇರಿಯಸ್ ಪುಂಡೋಲೆ ಮತ್ತು ಸೋದರ ಮಾವ ಜಹಾಂಗೀರ್ ಅವರೊಂದಿಗೆ ಗುಜರಾತ್‌ನಿಂದ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಮಿಸ್ತ್ರಿ ಮತ್ತು ಜಹಾಂಗೀರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಅನಹಿತಾ ಮತ್ತು ಡೇರಿಯಸ್ ತೀವ್ರವಾಗಿ ಗಾಯಗೊಂಡಿದ್ದರು.