ವಾಹನ ತಯಾರಕರು ಕಾರಿನ ಎಲ್ಲಾ ಸೀಟುಗಳಲ್ಲಿ ತ್ರಿ ಪಾಯಿಂಟ್ ಸೀಟ್ಬೆಲ್ಟ್ಗಳನ್ನು ಒದಗಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮುಂಭಾಗ ಹಾಗೂ ಹಿಂಭಾಗದ ವಿಂಡೋ ಸೀಟ್ಗಳು ಮಾತ್ರ ತ್ರಿ ಪಾಯಿಂಟ್ ಸೀಟ್ ಬೆಲ್ಟ್ಗಳನ್ನು ಹೊಂದಿದೆ. ಇದನ್ನು ವೈ ಆಕಾರದ ಬೆಲ್ಟ್ ಎಂದೂ ಕರೆಯುತ್ತಾರೆ. ಹೆಚ್ಚಿನ ಕಾರುಗಳಲ್ಲಿ ಹಿಂಭಾಗದ ಮಧ್ಯದ ಸೀಟುಗಳಲ್ಲಿನ ಬೆಲ್ಟ್ ಏರ್ಕ್ರಾಫ್ಟ್ ಸೀಟ್ ಬೆಲ್ಟ್ನಂತೆಯೆ ಇರುತ್ತದೆ.
ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಒಂದು ತಿಂಗಳೊಳಗಾಗಿಯೇ ಈ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತದಲ್ಲಿ ತಯಾರಾಗುವ ಕಾರುಗಳ ಒಟ್ಟಾರೆ ಸುರಕ್ಷತೆಯ ಗುಣಮಟ್ಟವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೆಲವೇ ಕೆಲವು ಕಾರುಗಳನ್ನು ಹೊರತುಪಡಿಸಿ ದೇಶದಲ್ಲಿ ಹಿಂಭಾಗದಲ್ಲಿ ಮಧ್ಯದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಇರುವುದಿಲ್ಲ. ಹೀಗಾಗಿ ಇದನ್ನು ಸರಿಪಡಿಸಲು ಕೇಂದ್ರ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.