ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದು, ಪದಕಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಇದರ ಮಧ್ಯೆ ಸೋಮವಾರದಂದು ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಮಹಿಳೆಯರ 10 ಕಿಮೀ ಸ್ಕ್ರ್ಯಾಚ್ ರೆಸ್ ವೇಳೆ ಈ ಅವಘಡ ಸಂಭವಿಸಿದೆ.
ಸ್ಪರ್ಧಿ ಮೀನಾಕ್ಷಿ ಒಂದು ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ತಮ್ಮ ಸೈಕಲ್ ನಿಂದ ಬಿದ್ದಿದ್ದಾರೆ. ಇದೆ ವೇಳೆ ಅವರ ಹಿಂದೆ ಬರುತ್ತಿದ್ದ ನ್ಯೂಜಿಲ್ಯಾಂಡ್ ನ ಬ್ರೊಯಾನಿ ಬೋಥಾ ಅವರಿದ್ದ ಸೈಕಲ್ ನೇರವಾಗಿ ಮೀನಾಕ್ಷಿಯವರ ಮೇಲೆ ಹರಿದಿದೆ. ಬಳಿಕ ಬೋಥಾ ಕೂಡಾ ಕೆಳಗೆ ಬಿದ್ದಿದ್ದಾರೆ.
ಈ ಅವಘಡ ಸಂಭವಿಸುತ್ತಿದ್ದಂತೆ ತುರ್ತು ವೈದ್ಯಕೀಯ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದೆ. ಈ ಅಪಘಾತದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.