ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ವಹಿಸಿರುವ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇದು ಕಾಟಾಚಾರಕ್ಕಾಗಿ ಮಾಡಿರುವ ಕೆಲಸದಂತಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಟ್ಟಾರು ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾತನಾಡಿದ ಕುಮಾರಸ್ವಾಮಿ, ತಮ್ಮ ಮೇಲಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕಾಗಿ ಪ್ರವೀಣ್ ನೆಟ್ಟಾರು ಕೇಸ್ ತನಿಖೆಯನ್ನು ಸರ್ಕಾರ ಎನ್ ಐ ಎ ಗೆ ವಹಿಸಿದೆ. ನಮ್ಮಲ್ಲಿಯೇ ಸಾಕಷ್ಟು ದಕ್ಷ ಅಧಿಕಾರಿಗಳು ಇದ್ದರು. ಈ ಬಗ್ಗೆ ಗಮನ ಹರಿಸಿಲ್ಲ. ಬರಿ ಬಾಯಿಮಾತಿನ ಕೆಲಸವಾಗಬಾರದು ಎಂದು ಕಿಡಿಕಾರಿದರು.
ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಶೀಘ್ರವಾಗಿ ಆಗಲಿ, ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಸಿಗುವ ಕೆಲಸವಾಗಬೇಕು ಎಂದರು.