ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈ ಮೊದಲು 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್ ಪಕ್ಷ, ಗುರುವಾರ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ವಲಸಿಗರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ತೊರೆದು ಬಂದಿದ್ದ ಬಾಬುರಾವ್ ಚಿಂಚನಸೂರ್ ಅವರಿಗೆ ಗುರುಮಿಟ್ಕಲ್, ಎನ್.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.
ಹಾಗೆಯೇ ಜೆಡಿಎಸ್ ತೊರೆದು ಬಂದಿದ್ದ ಎಸ್.ಆರ್. ಶ್ರೀನಿವಾಸ್ ಅವರಿಗೆ ಗುಬ್ಬಿಯಿಂದ, ಬಿ.ಎಲ್. ದೇವರಾಜು ಅವರಿಗೆ ಕೆ.ಆರ್. ಪೇಟೆ ಕ್ಷೇತ್ರದಿಂದ ಹಾಗೂ ಕೆ.ಸಿ. ವೀರೇಂದ್ರ ಅವರಿಗೆ ಚಿತ್ರದುರ್ಗದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ.
ಇನ್ನು ಕಾಂಗ್ರೆಸ್ಸಿನ ಐವರು ಹಾಲಿ ಶಾಸಕರ ಹೆಸರು ಎರಡನೇ ಪಟ್ಟಿಯಲ್ಲೂ ಪ್ರಕಟವಾಗದಿರುವುದು ಅಚ್ಚರಿ ಮೂಡಿಸಿದೆ. ಕುಂದಗೋಳದ ಕುಸುಮಾವತಿ ಶಿವಳ್ಳಿ, ಹರಿಹರದ ಎಸ್. ರಾಮಪ್ಪ, ಲಿಂಗಸಗೂರಿನ ಡಿ.ಎಸ್. ಹೂಲಗೇರಿ, ಶಿಡ್ಲಘಟ್ಟದ ವಿ. ಮುನಿಯಪ್ಪ ಹಾಗೂ ಪುಲಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳಿಗೆ ಎರಡನೇ ಪಟ್ಟಿಯಲ್ಲೂ ಟಿಕೆಟ್ ಖಾತರಿಯಾಗಿಲ್ಲ.