ಕಳೆದ ಕೆಲವು ದಿನಗಳಿಂದ ಸಚಿವ ಮಾಧುಸ್ವಾಮಿಯವರ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು, ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್ ಮಾಡುತಿದ್ದೇವೆ ಎಂದು ಹೇಳಿದ್ದು, ಅವರ ಈ ಹೇಳಿಕೆಗೆ ಸಹೋದ್ಯೋಗಿಗಳಿಂದಲೇ ವಿರೋಧ ವ್ಯಕ್ತವಾಗಿದೆ.
ಆ ಬಳಿಕ ಮಾತನಾಡಿದ್ದ ಮಾಧುಸ್ವಾಮಿ, ಆ ಆಡಿಯೋದಲ್ಲಿ ಮಾತನಾಡಿರುವುದು ತಾವೇ ಎಂದು ಒಪ್ಪಿಕೊಂಡಿದ್ದರಲ್ಲದೆ ಒಂದೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ರಾಜೀನಾಮೆ ಕೇಳಿದರೆ ನೀಡಲು ಸಿದ್ದ ಎಂದು ಸಹ ಹೇಳಿಕೊಂಡಿದ್ದರು.
ಇದೀಗ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ನೀಡಿರುವ ಹೇಳಿಕೆಯೊಂದು ಈಗ ಸಚಿವ ಮಾಧುಸ್ವಾಮಿ ಅವರನ್ನು ಮತ್ತೊಮ್ಮೆ ಮುನ್ನೆಲೆಗೆ ಬರುವಂತೆ ಮಾಡಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ರಾಜಣ್ಣ, ತಿಪಟೂರು ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ ಮಾಧುಸ್ವಾಮಿ ಹೇಳಿದ್ದರು ಎಂದಿದ್ದಾರೆ.
ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.