ಕೋಲಾರ: ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ನಾಯಕರು ತಲೆಕೆಡಿಸಿಕೊಳ್ಳಬೇಕಿಲ್ಲ, ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಅಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಆಗಿ ತಿಳಿಸಿದ್ದಾರೆ.
ಕೋಲಾರದಲ್ಲಿ ನಡೆಯುತ್ತಿರುವ ʼಜೈ ಭಾರತ್ʼ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಿಎಂ ಕುರ್ಚಿ ರೇಸ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಯಾರು ಬೇಕಾದರೂ ಸಿಎಂ ಆಗಲಿ, ಅದು ನನಗೆ ಬೇಡ. ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಹೇಳಿದ್ದಾರೆ.
ಬಹುಮತದಿಂದ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಬಗ್ಗೆ ಶಾಸಕರು ನಿರ್ಧಾರ ಮಾಡುತ್ತಾರೆ. ಈಗಲೇ ಆ ಚರ್ಚೆ ಬೇಡ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ.ಪಾಟೀಲ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.