ಕಾರವಾರ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡಜನರಿಗೆ ಮೋಸವಾಗಿದೆ. 4 ಕೋಟಿ 20 ಲಕ್ಷ ನಕಲಿ ವ್ಯಕ್ತಿಗಳಿಗೆ ರೇಷನ್ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನವರು ನಕಲಿ ಹೆಸರಲ್ಲಿ ಸ್ಕಾಲರ್ ಶಿಪ್ ನೀಡುತ್ತಿದ್ದರು. ಈ ಎಲ್ಲಾ ಹಣ ಕಾಂಗ್ರೆಸ್ ನಾಯಕರ ಜೇಬಿಗೆ ಹೋಗುತ್ತಿತ್ತು. ಕಾಂಗ್ರೆಸ್ ಅವಧಿಯಲ್ಲಿ ಶೇ.85ರಷ್ಟು ಕಮಿಷನ್ ಪಡೆಯುತ್ತಿದ್ದರು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ನಮಗೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ, ನಮಗೆ ಜನರೇ ರಿಮೋಟ್ ಕಂಟ್ರೋಲ್. ಡಬಲ್ ಇಂಜಿನ್ ಸರ್ಕಾರ ರಚನೆಯಾದಾಗ ಹಿಂದಿನ ಸರ್ಕಾರ ಕೆಟ್ಟ ಕಾರ್ಯಗಳನ್ನು ತೆಗೆಯುವುದರಲ್ಲೇ ಹೆಚ್ಚಿನ ಸಮಯ ಹೋಯಿತು. ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ವಿದೇಶದಿಂದ 30 ಸಾವಿರ ಕೋಟಿ ಹೂಡಿಕೆ ಆಯ್ತು ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಮೂರು ಪಟ್ಟು ಹೆಚ್ಚಿಗೆ ಅಂದರೆ 90 ಸಾವಿರ ಕೋಟಿ ಹೂಡಿಕೆಯಾಗಿದೆ. ರಾಜ್ಯದ ಅಭಿವೃದ್ಧಿಯೇ ಬಿಜೆಪಿಯ ಧ್ಯೇಯ ಎಂದರು.
ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದನ್ನು ಕಾಂಗ್ರೆಸ್ ವಿರೋಧಿಸಿತು. ಆಗಲೇ ಆದಿವಾಸಿ ಜನರು ಕಾಂಗ್ರೆಸ್ ದೂರವಿಡಲು ನಿರ್ಧರಿಸಿದರು. ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ದಿಯೇ ಬಿಜೆಪಿಯ ಸಂಕಲ್ಪ ಎಂದು ಹೇಳಿದರು.