ಬೆಂಗಳೂರು: ಲೋಕಾಯುಕ್ತದಲ್ಲಿ ಅನೇಕ ದೂರುಗಳು ಸಲ್ಲಿಕೆಯಾದ ಕಾರಣ, ತನಿಖೆ ನಡೆಯುವ ಭಯದಿಂದ ರಾತ್ರೋರಾತ್ರಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭ ಮಾಡಿದ ಸಿದ್ದರಾಮಯ್ಯನವರ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಇದ್ದ ಏಕೈಕ ಉದ್ದೇಶವೆಂದರೆ ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದಾಗಿತ್ತು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸುಧಾಕರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರದ ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದರು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಟೆಂಡರ್ ಲಾಭಾಂಶವನ್ನು ಶೇ 50ರಷ್ಟು ಹೆಚ್ಚಿಸಿದ ಉದಾಹರಣೆಗಳು ನಮ್ಮ ಮುಂದಿದೆ. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು 2022ರ ಮೇ ತಿಂಗಳಿನಲ್ಲೇ ಟೆಂಡರ್ ಲಾಭಾಂಶವು ಶೇ 5ಕ್ಕಿಂತ ಹೆಚ್ಚಿಗೆ ಆಗಬಾರದು ಎಂದು ಆದೇಶ ಹೊರಡಿಸಿದ್ದರು ಎಂದರು.
ಭ್ರಷ್ಟಾಚಾರ ನಡೆಯದಂತೆ ಕ್ರಮ ಕೈಗೊಂಡ ನಮ್ಮ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ವಿಪರ್ಯಾಸ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ಸೇರಿಸಿ ಒಟ್ಟು 10 ಸಾವಿರ ರೈತರಿಗೆ ದೊರೆಯುತ್ತಿದ್ದು, 53.83 ಲಕ್ಷ ರೈತರಿಗೆ ಅನುಕೂಲವಾಗಿದೆ. ಆದರೆ ಕಾಂಗ್ರೆಸ್‌ನವರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಅಕ್ಕಿ ಪಡೆದುಕೊಂಡು ತಾವೇ ನೀಡಿದ್ದು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿಎಜಿಯ ಅಧಿಕೃತ ವರದಿಯಲ್ಲಿ 2013-2018ರ ವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಕೋಟ್ಯಾಂತರ ರೂಪಾಯಿಗಳ ಹಣಕಾಸಿನ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅನ್ನ ಭಾಗ್ಯದ ಹಗರಣ, ವಕ್ಫ್ ಮಂಡಳಿಯ ಸುಮಾರು 2.6 ಲಕ್ಷ ಕೋಟಿ ಬೆಲೆ ಬಾಳುವ 29 ಸಾವಿರ ಎಕರೆ ಆಸ್ತಿ ಅವ್ಯವಹಾರ, 900 ಎಕರೆಯಷ್ಟು ಜಮೀನನ್ನು ರೀಡೂ ಮಾಡಿದ ಹಗರಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಡೆದಿದ್ದ ಎಲ್ಲಾ ಪ್ರಕರಣಗಳ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಅಂದರೆ ಅದೊಂದು ಭ್ರಷ್ಟಾಚಾರದ ಗಂಗೋತ್ರಿ. ಕಳೆದ 60 ವರ್ಷಗಳಿಂದ ದೇಶ ಲೂಟಿ ಹೊಡೆದಿದ್ದೇ ಕಾಂಗ್ರೆಸ್. ಚುನಾವಣೆಯು ಹತ್ತಿರ ಬರುತ್ತಿದ್ದಂತೆ ನಮ್ಮ ಸರ್ಕಾರದ ವಿರುದ್ಧ ಆಧಾರವಿಲ್ಲದ ಆರೋಪ ಮಾಡುವುದರಿಂದ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್‌ನವರಿಗೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.