ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಾಯಕತ್ವದ ಕುಸ್ತಿಗಾಗಿ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮೇಕೆದಾಟು ಯೋಜನೆಗಾಗಿ ಏನನ್ನೂ ಮಾಡಿಲ್ಲ. ಈಗ ಪಾದಯಾತ್ರೆಯ ಮಾತನಾಡುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಪಕ್ಷದ ನಾಯಕತ್ವಕ್ಕಾಗಿ ಕಾಂಗ್ರೆಸ್ ನಲ್ಲಿಯೇ ಪೈಪೋಟಿ ಇದೆ. ನಾಯಕತ್ವಕ್ಕಾಗಿ ಕಾದಾಟಕ್ಕಿಳಿದು ಈಗ ಡಿ.ಕೆ.ಶಿವಕುಮಾರ್ ಪಾದಯಾತ್ರೆಗೆ ಕರೆ ನೀಡಿದ್ದಾರೆ ಎಂದರು.
ಮೇಕೆದಾಟು ಯೋಜನೆಗಾಗಿ ಕುಮಾರಸ್ವಾಮಿ ನಮ್ಮ ಕಾಲದಲ್ಲಿ ಡಿಪಿಆರ್ ಆಯಿತು ಎನ್ನುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಡಿಪಿಆರ್ ನಾವು ಮಾಡಿದ್ದು ಎನ್ನುತ್ತಿದ್ದಾರೆ. ಮೊದಲು ಡಿಪಿಆರ್ ಯಾರು ಮಾಡಿದ್ದು ಎಂದು ಸ್ಪಷ್ಟನೆ ನೀಡಲಿ ಎಂದು ಹೇಳಿದರು.
ಬಿಜೆಪಿ ಏನೇ ಯೋಜನೆಗಳನ್ನು ತಂದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆ. ಸಿಎಎ ಜಾರಿಗೆ ತಂದಾಗಲೂ ಕಾಂಗ್ರೆಸ್ ವಿರೋಧಿಸಿತ್ತು. ಎನ್ ಇ ಪಿ, ಗೋಹತ್ಯೆ ನಿಷೇಧ ಕಾಯ್ದೆಯನ್ನೂ ವಿರೋಧಿಸಿದರು. ಮತಾಂತರ ನಿಷೇಧ ಕಾಯ್ದೆಯನ್ನೂ ವಿರೋಧಿಸುತ್ತಿದ್ದಾರೆ. ದೇಶಕ್ಕೆ ಹಿತವಾಗುವ ಕಾಯ್ದೆಗೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಬಹುಸಂಖ್ಯಾತರ ಭಾವನೆಗೆ ಯಾವತ್ತೂ ಸ್ಪಂದಿಸಲ್ಲ ಎಂಬುದು ಖಚಿತವಾಗಿದೆ.
ಇದೇ ವೇಳೆ ಡಿ.ಕೆ.ಶಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಶಾಪಗ್ರಸ್ತರಾಗಿರುವ ಡಿ.ಕೆ.ಶಿವಕುಮಾರ್, ಜಾಮೀನಿನ ಮೇಲೆ ಹೊರಗಿದ್ದಾರೆ. ಅವರನ್ನು ಯಾವಾಗ ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಗುಡುಗಿದ್ದಾರೆ.