ಕಲಬುರ್ಗಿ: ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ನದ್ದು ರಾಷ್ಟ್ರ ದ್ರೋಹಿ ಪ್ರಣಾಳಿಕೆ ಎಂದು ಕಿಡಿಕಾರಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನವರು ತಕ್ಷಣ ಪ್ರಣಾಳಿಕೆ ಹಿಂಪಡೆಯಬೇಕು. ಬಜರಂಗದಳ ವಿಷಯಕ್ಕೆ ಬಂದಿದ್ದರಿಂದ ಕಾಂಗ್ರೆಸ್ ಅಧಿಕಾರವನ್ನೇ ಕಳೆದುಕೊಳ್ಳಲಿದೆ. ವಿಪಕ್ಷ ಸ್ಥಾನ ಪಡೆಯುವಷ್ಟು ಸ್ಥಾನ ಕೂಡ ಕಾಂಗ್ರೆಸ್ ಗೆ ಬರಲಾರದು ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿ ಎಫ್ ಐ ಮೇಲಿದ್ದ 173 ಪ್ರಕರಣ ಹಿಂಪಡೆಯಿತು. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ದೇಶದಲ್ಲಿ ಪಿ ಎಫ್ ಐ ಬ್ಯಾನ್ ಆಗಿದೆ ಎನ್ನುವುದೇ ಕಾಂಗ್ರೆಸ್ ಗೆ ಗೊತ್ತಿಲ್ಲ. ಪಿ ಎಫ್ ಐ ಹಾಗೂ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿದೆ. ಬಜರಂಗದಳ ವಿಚಾರಕ್ಕೆ ಬಂದಿದ್ದಕ್ಕೆ ಕಾಂಗ್ರೆಸ್ ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳುತ್ತೆ ಎಂದು ಹೇಳಿದ್ದಾರೆ.