ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಆರಂಭವಾಗಿದೆ.
ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ನೇರ ಹಣಾಹಣಿ ನಡೆದಿದ್ದು, ಸಿದ್ದರಾಮಯ್ಯ ಬೆಂಬಲಿಗರು ಒಂದೆಡೆ ಸಭೆ ನಡೆಸಿದ್ದರೆ, ಇನ್ನೊಂದೆಡೆ ಒಕ್ಕಲಿಗ ಮಠಾಧೀಶರು ಡಿ.ಕೆ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದೇ ವೇಳೆ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಕೆಲ ದಲಿತ ಮುಖಂಡರು ಪರಮೇಶ್ವರ್ ಮನೆಗೆ ದೌಡಾಯಿಸಿದ್ದು, ಸಭೆ ನಡೆಸಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಜೋರಾಗಿದ್ದು, ಬೆಂಗಳೂರಿನ ರಾಜಾಜಿ ನಗರದ ಒಂದೇ ರಸ್ತೆಯಲ್ಲಿ ಉಭಯ ನಾಯಕರ ಬೆಂಬಲಿಗರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಬ್ಯಾನರ್, ಕಟೌಟ್ ಗಳನ್ನು ಅಳವಡಿಸಿದ್ದಾರೆ.