ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಇಂದು ಕೊನೇ ಹಂತ ತಲುಪಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆಗಳಲ್ಲಿ ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುತ್ತಿದ್ದಾರೆ. ಈ ನಡುವೆ ಹೈಕೋರ್ಟ್ ರ್ಯಾಲಿ, ಪ್ರತಿಭಟನೆ, ಮೆರವಣಿಗಳ ಬಗ್ಗೆ ಮಹತ್ವದ ಆದೇಶ ನೀಡಿದೆ.
ಸಂಚಾರಕ್ಕೆ ತೊಂದರೆಯಾಗುವಂತಹ ಸ್ಥಳಗಳಲ್ಲಿ ಪ್ರತಿಭಟನೆ, ರ್ಯಾಲಿ, ಮೆರವಣಿಗೆಗಳಿಗೆ ಯಾವುದೇ ರೀತಿಯ ಅವಕಾಶ ನೀಡುವಂತಿಲ್ಲ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಧರಣಿ, ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಸಂಚಾರಕ್ಕೆ ಅಡ್ಡಿಯಾಗುವ ಸ್ಥಳಗಳಲ್ಲಿ ಧರಣಿ, ಪ್ರತಿಭಟನೆ, ಪಾದಯಾತ್ರೆಗಳಿಗೆ ಅನುಮತಿ ನೀಡಬಾರದು. ತಕ್ಷಣ ಆದೇಶ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಿಂದಾಗಿ ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ರೈಲ್ವೆ ಪ್ಯಾರಲಲ್ ರೋಡ್, ಮಲ್ಲೇಶ್ವರಂ ಸೇರಿದಂತೆ ಹಲವೆಡೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಈ ಮಧ್ಯೆ ಹೈಕೋರ್ಟ್ ನೀಡಿರುವ ಆದೇಶ ಮಹತ್ವ ಪಡೆದುಕೊಂಡಿದೆ.