ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾಳೆಯಿಂದ ಆರಂಭವಾಗಲಿರುವ ಕಾಂಗ್ರೆಸ್ ಪಾದಯಾತ್ರೆಗೆ ಮುಹೂರ್ತ ನಿಗದಿಯಾಗಿದ್ದು ಬೆಳಿಗ್ಗೆ 8:50ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜ್ಯೋತಿಷಿಗಳ ಬಳಿ ಸಮಯ ನಿಗದಿಪಡಿಸಿದ್ದು, ನಾಳೆ ಬೆಳಿಗ್ಗೆ ಮಕರ ಲಗ್ನ, ರೇವತಿ ನಕ್ಷತ್ರ, ಮೀನ ರಾಶಿಯಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಈ ಮುಹೂರ್ತದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಮೇಕೆದಾಟುವಿನಿಂದ ಬೆಂಗಳೂರಿನತ್ತ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಈ ಪಾದಯಾತ್ರೆಯಲ್ಲಿ ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಪಾದಯಾತ್ರೆಗೆ ತಡೆ ನೀಡಲು ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಪಾದಯಾತ್ರೆ ಬೆನ್ನಲ್ಲೇ ಜೆಡಿಎಸ್ ಕೂಡ ಜಲಧಾರೆ ಯಾತ್ರೆ ಹೆಸರಲ್ಲಿ ನೀರಿಗಾಗಿ ಹೋರಾಟ ಘೋಷಿಸಿದೆ. ಒಟ್ಟಾರೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಮೂರು ರಾಜಕೀಯ ಪಕ್ಷಗಳು ನೀರಾವರಿ ಯೋಜನೆ ಹೆಸರಲ್ಲಿ ಹೋರಾಟದ ಹಾದಿ ಹಿಡಿದಿವೆ.