ಹುಬ್ಬಳ್ಳಿ: ಹಗರಣಗಳಿಲ್ಲದೇ ಕಾಂಗ್ರೆಸ್ ಸರ್ಕಾರ ಎಂದೂ ನಡೆದಿಲ್ಲ. ಕಾಂಗ್ರೆಸ್ ನ ಪ್ರತಿ ಅವಧಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ರಕ್ತ ಬೀಜಾಸುರ. ಕಾಂಗ್ರೆಸ್ ಭ್ರಷ್ಟಾಚಾರ ಎಂಬ ಮೊಟ್ಟೆಗಳನ್ನು ಇಟ್ಟಿದೆ. ಆ ಮೊಟ್ಟೆಗಳಿಗೆ ಕಾವು ಕೊಟ್ಟು ನೂರಾರು ಮರಿಗಳನ್ನು ಮಾಡಿ ರಕ್ತ ಬೀಜಾಸುರರ ರೀತಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ ತೊಡೆದು ಹಾಕಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲ. ಹುಲ್ಲಿನ ರೀತಿ ಬೆಳೆದುಕೊಳ್ಳುತ್ತಿದೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ. ಹಾಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಆ ಪಕ್ಷಕ್ಕೆ ಇಲ್ಲ, ಕಾಂಗ್ರೆಸ್ ನ ಪ್ರತಿ ಅವಧಿಯಲ್ಲಿ ಹಗರಣಗಳು ನಡೆದಿದೆ. ಬಿಜೆಪಿಯದ್ದು ಭ್ರಷ್ಟ ಸರ್ಕಾರ ಎಂದು ಹೇಳುವ ನೈತಿಕತೆ ರಾಹುಲ್ ಗಾಂಧಿಗಿಲ್ಲ. 40% ಕಮಿಷನ್ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇದು ರಾಹುಲ್ ತಪ್ಪಲ. ಅವರಿಗೆ ಭಾಷಣ ಬರೆದುಕೊಟ್ಟವರ ತಪ್ಪು. ಅವರ ಬಳಿ ಇರುವ ಚೀಟಿ ಕಸಿದುಕೊಂಡರೆ ಅವರಿಗೆ ಏನೂ ನೆನಪಿರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.