ಬೆಂಗಳೂರು: ಕಾಂಗ್ರೆಸ್ ನ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಕಿಡಿಕಾರಿದ್ದು, ಕಾಂಗ್ರೆಸ್ ನವರು ಲಿಂಗಾಯಿತ ಸಿಎಂ ಆವರನ್ನು ಟಾರ್ಗೆಟ್ ಮಾಡಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಪ್ರತಿಬಾರಿ ಕಾಂಗ್ರೆಸ್ ನಾಯಕರು ಲಿಂಗಾಯಿತ ಸಮಾಜದ ಸಿಎಂ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಪ್ರಬಲ ಸುಮುದಾಯದ ವಿರುದ್ಧ ಹೋರಾಟ ನಡೆಸುತ್ತಾರೆ. ವೀರೆಂದ್ರ ಪಾಟೀಲ್, ಕೆಂಗಲ್ ಹನುಮಂತಯ್ಯ ಅವರನ್ನೂ ಬಿಟ್ಟಿಲ್ಲ. ಯಾವ ಯಾವ ನಾಯಕರು ಉತ್ತಮ ಆಡಳಿತ ನಡೆಸುತ್ತಾ ಬಂದಿದ್ದಾರೆ ಆ ನಾಯಕರನ್ನೆಲ್ಲ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತೆ. ವೈಯಕ್ತಿಕ ಲಾಭಕ್ಕಾಗಿ ಇಂತಹ ಕೀಳು ಮಟ್ಟಕ್ಕೆ ಕಾಂಗ್ರೆಸ್ ನವರು ಇಳಿಯುವುದು ಸರಿಯಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನವರು ತೀರಾ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇವರೇನು ಸತ್ಯ ಹರಿಶ್ಚಂದ್ರರಾ? ಕಾಂಗ್ರೆಸ್ ನಲ್ಲಿ ಎಷ್ಟು ಜನರು ಜೈಲಿಗೆ ಹೋಗಿದ್ದಾರೆ ? ಎಷ್ಟು ಜನ ಇನ್ನೂ ಬೇಲ್ ಮೇಲೆ ಹೊರಗಿದ್ದಾರೆ ? ಕಾಂಗ್ರೆಸ್ ನವರಿಗೆ ಏನು ನೈತಿಕತೆಯಿದೆ ? ಮಾಜಿ ಸಿಎಂ ರಸ್ತೆಗೆ ಬಂದು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುತ್ತಾರೆ ಎಂದರೆ ಏನರ್ಥ? ಎಂದು ವಾಗ್ದಾಳಿ ನಡೆಸಿದ್ದಾರೆ.