ಚಿತ್ರದುರ್ಗ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಡೆದಷ್ಟು ಭ್ರಷ್ಟಾಚಾರ ಇತಿಹಾಸದಲ್ಲೇ ನಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಅರ್ಕಾವತಿ ಹಗರಣವನ್ನೇ ಮುಚ್ಚಿ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಕಟೀಲು, ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದರು. ಈಗ ಬಾದಾಮಿ ಕ್ಷೇತ್ರವನ್ನು ತೊರೆಯುವ ಹಂತದಲ್ಲಿದ್ದಾರೆ. ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಕಾಂಗ್ರೆಸ್ ನಲ್ಲಿ ಪೈಪೋಟಿ ಆರಂಭವಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಗೆಲುವು ಸಾಧಿಸಲಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಪರಸ್ಪರ ಕಿತ್ತಾಟ ನದೆಯುತ್ತಿದೆ. ಸಿದ್ದರಾಮಯ್ಯ ಶಿಷ್ಯ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಸುಟ್ಟರು, ಈವರೆಗೂ ನ್ಯಾಯ ಸಿಕ್ಕಿಲ್ಲ, ಒಳಗೊಳಗೆ ಡಿಕೆಶಿಯವರನ್ನು ಮುಗಿಸುವ ತಂತ್ರವನ್ನು ಸಿದ್ದರಾಮಯ್ಯ ಹೆಣೆಯುತ್ತಿದ್ದಾರೆ. ಸ್ವಜಾತಿಯವರನ್ನು ಬಳಸಿ ಡಾ.ಪರಮೇಶ್ವರ್ ಅವರನ್ನು ಸೋಲಿಸಿದರು. ಸಿಎಂ ಸ್ಥಾನಕ್ಕೆ ಪ್ರತಿಸ್ಪರ್ಧಿ ಇರಬಾರದು ಎಂದು ಷಡ್ಯಂತ್ರ ನಡೆಸಿದರು. ಕಾಂಗ್ರೆಸ್ ನಾಯಕರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಮುಂದಿನ ಸಿಎಂ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.