ಬೆಳಗಾವಿ: ಕಾಂಗ್ರೆಸ್ ನಾಯಕರು ಆಂಜನೇಯನಿಗೂ ಅಪಮಾನ ಮಾಡುತ್ತಿದ್ದಾರೆ. ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸುವ ಮೂಲಕ ಹನುಮ ಭಕ್ತರನ್ನು ಅವಮಾನಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ಅವರನ್ನು ಕಾಂಗ್ರೆಸ್ ಪಕ್ಷದವರು ಬೆಳಗಾವಿ ಹಿಂಡಲಗಾ ಜೈಲಿಗೆ ಹಾಕಿದ್ದರು. ಎರಡು ಬಾರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರ ಸಾವರ್ಕರ್ ಅವರನ್ನು ಕಾಂಗ್ರೆಸ್ ನಾಯಕರು ಪದೇ ಪದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ಸಾವರ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ನೀವು 10 ಜನ್ಮ ಹುಟ್ಟಿ ಬಂದರೂ ಸಾವರ್ಕರ್ ರಂತಹ ಬಲಿದಾನ ನೋಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರನ್ನು ಬೈದಿದ್ದಾರೆ. ಖರ್ಗೆಯವರೇ ಮೋದಿಯವರನ್ನು ಬೈದಷ್ಟೂ ಕಮಲ ಹೆಚ್ಚು ಅರಳುತ್ತೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅಟಲ್ ಕ್ಯಾಂಟೀನ್ ಆರಂಭವಾಗುತ್ತದೆ. ಕಿತ್ತೂರು ಕರ್ನಾಟಕದಲ್ಲಿ ಅನೇಕ ಯೋಜನೆ ಜಾರಿ ಮಾಡಿದ್ದೇವೆ. ಬೆಳಗಾವಿಗೆ 25 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.