ಬೆಂಗಳೂರು: ಕಾಂಗ್ರೆಸ್ ನವರ ಮುಸುಕಿನ ಗುದ್ದಾಟಕ್ಕಾಗಿ ಪಾದಯಾತ್ರೆ ನಡೆದಿದೆ. ಪಕ್ಷದ ಕಚೇರಿಯಲ್ಲಿ ಕುಳಿತು ಚರ್ಚೆ ನಡೆಸಬಹುದಿತ್ತು. ಬೆಟ್ಟ ಅಗೆದು ಇಲಿ ಕೂಡ ಹಿಡಿಯಲಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ಕಾಂಗ್ರೆಸ್ ನಾಯಕರ ಪಾದಯಾತ್ರೆಯಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಕೊರೊನಾ ಸೋಂಕು ಬರುವಂತಾಯಿತು. ಈಗಾಗಲೇ ಕಾಂಗ್ರೆಸ್ ನ ಹಲವು ನಾಯಕರಿಗೂ ಸೋಂಕು ಬಂದಿದೆ. ಕೆಲ ಕೈ ನಾಯಕರು ಇನ್ನೂ ಟೆಸ್ಟ್ ಕೂಡ ಮಾಡಿಸಿಕೊಂಡಿಲ್ಲ. ಪಾದಯಾತ್ರೆ ಎಂದು ಬೆಟ್ಟ ಅಗೆದು ಇವರು ಮಾಡಿದ್ದೇನು ? ಎಂದು ವಾಗ್ದಾಳಿ ನಡೆಸಿದರು.
ಸದ್ಯ ಮೇಕೆದಾಟು ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಯಾವುದೇ ಹೋರಾಟದಿಂದ ಸಮಸ್ಯೆ ಇತ್ಯರ್ಥವಾಗಲ್ಲ. ಕುಡಿಯುವ ನೀರಿಗಾಗಿ ಯೋಜನೆ ಜಾರಿ ಮಾಡುತ್ತಿರುವುದಾಗಿ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕಾಂಗ್ರೆಸ್ ನವರು ಬೆಳೆಗಳಿಗೂ ನೀರು ಹರಿಸಬೇಕು ಎನ್ನುತ್ತಿದ್ದಾರೆ. ಇದಕ್ಕೆ ತಮಿಳುನಾಡು ವಿರೋಧ ಮಾಡುತ್ತಿದೆ. ಇದು ಕುಡಿಯುವ ನೀರಿನ ಯೋಜನೆಯಲ್ಲ ಎಂದು ವಾದಿಸುತ್ತಿದ್ದಾರೆ. ಇದರಿಂದ ನಮ್ಮ ವಾದಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಕಾಂಗ್ರೆಸ್ ನಾಯಕರು ಮೊದಲು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಆಗ ಅವರಿಗೆ ವಿಷಯ ಗೊತ್ತಾಗುತ್ತದೆ. ಕೊರೊನಾ ಸೋಂಕು ತಮಗೆ ಹರಡಿದೆಯೇ ಇಲ್ಲವೇ? ಎಂಬುದು ಎಂದು ಹೇಳಿದರು.