ಶಿವಮೊಗ್ಗ: ಈ ಜನ್ಮದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಂದಾಗಲ್ಲ. ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಆಂತರಿಕ ಗೊಂದಲ ಹೆಚ್ಚಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಆಲಿಂಗನ ವಿಚಾರವಾಗಿ, ರಾಷ್ಟ್ರೀಯ ನಾಯಕರೇ ಅಪ್ಪಿಕೊಳ್ಳಲು ಹೇಳಿಕೊಡಬೇಕು. ಹೀಗೆ ಅಪ್ಪಿಕೊಳ್ಳಿ ಎಂದು ರಾಹುಲ್ ಗಾಂಧಿ ತೋರಿಸಿಕೊಟ್ರು. ಏನೇ ಮಾಡಿದರೂ ಸಿದ್ದರಾಮಯ್ಯ- ಡಿಕೆಶಿ ಒಂದಾಗಲ್ಲ, ಅವರು ಮಾತ್ರವಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಂದಾಗುವ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ ನಾಯಕರಿಗೆ ಬೀಳುವ ಕನಸು ಬೇರೆ ಯಾರಿಗೂ ಬೀಳಲ್ಲ. ಮತ್ತೆ ಅಧಿಕಾರಕ್ಕೆ ಬರ್ತೀವಿ ಎಂಬ ಭ್ರಮೆಯಲ್ಲಿದ್ದಾರೆ. ನೀವು ಅಯೋಗ್ಯರು ಎಂದು ಜನರೇ ನಿಮ್ಮನ್ನು ಕಿತ್ತು ಬಿಸಾಕಿದ್ದಾರೆ. ಬಡವರ ಪರವಿಲ್ಲ ಎಂದೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬುದು ಭ್ರಮೆ. ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರೋದು ಖಚಿತ ಎಂದು ಹೇಳಿದರು.