ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದ ವೇಳೆ 85 ಪರ್ಸೆಂಟ್ ಕಮಿಷನ್ ಇತ್ತು ಎಂದು ಆರೋಪಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಷಯವನ್ನು ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿ ಅವರೇ ಹೇಳಿದ್ದರು. ದೆಹಲಿಯಿಂದ 100 ರೂಪಾಯಿ ಕಳಿಸಿದರೆ ಹಳ್ಳಿಗಳಿಗೆ 15 ರೂಪಾಯಿ ತಲುಪುತ್ತಿತ್ತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು ಎಂದರು.
ಅವರು ಇಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ರಾಜೀವ್ ಗಾಂಧಿ ಈ ಮಾತು ಹೇಳಿದ ವೇಳೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆದರೆ ಇದೀಗ ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರ ಎಲ್ಲಾ ಯೋಜನೆಗಳ ಫಲಾನುಭವಿಗಳಿಗೆ ಡಿಬಿಟಿ ವ್ಯವಸ್ಥೆ ಮೂಲಕ ಶೇಕಡ 100 ರಷ್ಟು ಮೊತ್ತ ತಲುಪುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭೂಮಿ, ಆಕಾಶ ಹಾಗೂ ಪಾತಾಳದಲ್ಲಿಯೂ ಭ್ರಷ್ಟಾಚಾರ ನಡೆಸಿದೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಕಾಶದ ಭ್ರಷ್ಟಾಚಾರ ಎಂದರೆ 2ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಭೂಮಿ ಮೇಲಿನ ಹಗರಣ ಹಾಗೂ ಪಾತಾಳದಲ್ಲಿ ಭ್ರಷ್ಟಾಚಾರವೆಂದರೆ ಕಲ್ಲಿದ್ದಲು ಹಗರಣ ಎಂದು ಹೇಳಿದರು.