ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದರೂ ಎಲ್ಲಿಯೂ ಕಾಣಿಸಿಕೊಳ್ಳದ ಶಾಸಕ ಜಮೀರ್ ಅಹ್ಮದ್, ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕಾಂಗ್ರೆಸ್ ನಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ. ದೆಹಲಿಯಲ್ಲಿ ನಡೆದ ರಾಹುಲ್ ಗಾಂಧಿ ಜತೆಗಿನ ಸಭೆಗೂ ತಮಗೆ ಆಹ್ವಾನಿಸಿಲ್ಲ ಎಂದು ಜಮೀರ್ ತಮ್ಮ ಆತ್ಮೀಯರಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಜತೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಕಾಂಗ್ರೆಸ್ ಬಿಡುವ ಬಗ್ಗೆ ಶಂಕೆ ಹೆಚ್ಚಿದೆ.
ಮತ್ತೊಂದೆಡೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಎಸ್.ಆರ್.ಪಾಟೀಲ್ ಕೂಡ ಕಾಂಗ್ರೆಸ್ ತೊರೆಯುವ ಸಾಧ್ಯತೆ ಇದೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಎಸ್.ಆರ್.ಪಾಟೀಲ್ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜ್ಯಕ್ಕೆ ರಾಹುಲ್ ಭೇಟಿ ನೀಡಿದ ವೇಳೆಯೂ ಸಭೆಗೆ ಗೈರಾಗಿದ್ದಾರೆ. ಅಲ್ಲದೇ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿರುವ ಎಸ್.ಆರ್.ಪಾಟೀಲ್, ಸಚಿವ ಗೋವಿಂದ ಕಾರಜೋಳ ಜತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಕಾಂಗ್ರೆಸ್ ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.