ಕೋಲಾರ: ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಕೈಬಿಟ್ಟು ಮೊದಲು ತಮ್ಮ ಪಕ್ಷದ ನಾಯಕರನ್ನು ಒಂದುಗೂಡಿಸಲಿ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಭಾರತ್ ಜೋಡೋ ಯಾತ್ರೆಯಿಂದ ದೇಶ ವಿಭಜಿಸುವ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಮೊದಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಬಿಟ್ಟು ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ಒಂದು ಮಾಡಲಿ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಅವರನ್ನು ಒಂದು ಮಾಡಲಿ. ತಮ್ಮ ಪಕ್ಷದಲ್ಲಿಯೇ ಒಡಕು, ಹುಳುಕು ಇಟ್ಟುಕೊಂಡು ದೇಶವನ್ನು ಒಂದು ಮಾಡುತ್ತೇನೆ ಎನ್ನುವುದು ನಗೆಪಾಟಲು ಎಂದು ವ್ಯಂಗ್ಯವಾಡಿದರು.
ಮೂರು ವರ್ಷಗಳಿಂದ ತಮ್ಮ ಪಕ್ಷಕ್ಕೆ ಒಬ್ಬ ಸಮರ್ಥ ಅಧ್ಯಕ್ಷರನ್ನು ಆಯ್ಕೆಮಾಡಲು ಆಗಿಲ್ಲ. ಈಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲವಂತದಿಂದ ಅಧ್ಯಕ್ಷರನ್ನಾಗಿ ಮಾಡುತ್ತಿದ್ದೀರಿ. ಪಕ್ಷಕ್ಕೆ ಸಮರ್ಥರನ್ನು ಅಧ್ಯಕ್ಷರನ್ನಾಗಿ ಮಾಡಲಾಗದವರು ದೇಶವನ್ನು ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.