ಕೋಲಾರ: ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಯಾವುದೂ ಜಾರಿಗೆ ಬರುವುದಿಲ್ಲ. ಈ ಹಿಂದೆ 2005ರಿಂದ 2014ರವರೆಗೆ 10 ವರ್ಷಗಳ ಕಾಲ ಬರಿ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. 10 ವರ್ಷ ಆಡಳಿತ ನಡೆಸಿದರೂ ಯಾವೊಂದು ಹಳ್ಳಿಗೂ ವಿದ್ಯುತ್ ನೀಡಿಲ್ಲ, ಜನ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ 18 ದಿನಕ್ಕೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಿದ್ದೆವು. ಕಾಂಗ್ರೆಸ್ ನವರದ್ದು ಗುಜರಿ ಇಂಜಿನ್ ಇದ್ದಂತೆ. ಕರ್ನಾಟಕದಲ್ಲಿ ಕೇಂದ್ರದಲ್ಲಿರುವಂತೆಯೇ ಗಟ್ಟಿಯಾದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಕಾಂಗ್ರೆಸ್ ನವರು ರೈತರ ಅಭಿವೃದ್ಧಿಗಾಗಿ ಎಂದೂ ಯೋಚಿಸಿದವರಲ್ಲ. ಕೇಂದ್ರ ಸರ್ಕಾರ 1 ರೂಪಾಯಿ ಬಿಡುಗಡೆ ಮಾಡಿದ್ದರೆ 15 ಪೈಸೆಯನ್ನು ಮಾತ್ರ ಜನರಿಗೆ ಕೊಡುತ್ತಿದ್ದರು. ಉಳಿದ ಹಣವನ್ನು ಕಾಂಗ್ರೆಸ್ ನಾಯಕರು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದರು. ರೈತರಿಗೆ ದೊರೆಯಬೇಕಿದ್ದ ಶೇ.80ರಷ್ಟು ಹಣವನ್ನು ಕಾಂಗ್ರೆಸ್ ನವರು ನುಂಗಿ ನೀರು ಕುಡಿದಿದ್ದಾರೆ. ಇದನ್ನು ಕಾಂಗ್ರೆಸ್ ನ ಪ್ರಧಾನಿಯೇ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 85% ಕಮಿಷನ್ ನಡೆಯುತ್ತಿತ್ತು. ಇದನ್ನು ಬಿಜೆಪಿ ಹೇಳುತ್ತಿಲ್ಲ. ಕಾಂಗ್ರೆಸ್ ನಲ್ಲಿದ್ದ ನಾಯಕರೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಎಂದು ಗುಡುಗಿದ್ದಾರೆ.