ಬೆಂಗಳೂರು: ರಾಜಕೀಯವಾಗಿ ಈಗಾಗಲೇ ಮೂಲೆಗುಂಪಾಗಿದ್ದ ಆಳ್ವಾ ಕುಟುಂಬಕ್ಕೆ ಭವಿಷ್ಯದ ಎಲ್ಲ ರಾಜಕೀಯ ಆಯ್ಕೆಗಳನ್ನು ಕಾಂಗ್ರೆಸ್ ವರಿಷ್ಠರು “ಡೆಡ್ ಎಂಡ್” ಗೆ ತಂದು ನಿಲ್ಲಿಸಿದ್ದಾರೆ. ಮಾರ್ಗರೇಟ್ ಆಳ್ವ ಅವರನ್ನು ಕಾಂಗ್ರೆಸ್ ಹರಕೆಯ ಕುರಿಯಾಗಿಸಲು ಹೊರಟಿದೆ ಎಂದು ರಾಜ್ಯ ಬಿಜೆಪಿ ಘಟಕ ಹಿಗ್ಗಾಮುಗ್ಗಾ ಟೀಕಿಸಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಎಂದು ಮಾರ್ಗರೇಟ್ ನೇರ ಆರೋಪ ಮಾಡಿದ್ದರು. ಹೊರಗಡೆಯಿಂದ ಬಂದವರು, ರಾಜ್ಯದ ಬಗ್ಗೆ ಅರಿವಿಲ್ಲದವರು ಟಿಕೆಟ್ ನಿರ್ಧರಿಸುತ್ತಿದ್ದಾರೆ ಎಂದು ದೂರಿದ್ದರು. ಕಾಂಗ್ರೆಸ್ ಧೋರಣೆಯನ್ನು ಪ್ರಶ್ನಿಸಿದವರಿಗೇ ಮಣೆ ಹಾಕಿರುವುದರ ಗುಟ್ಟೇನು? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೋಲುವ ಸ್ಪರ್ಧೆಗೆ ಮಾರ್ಗರೇಟ್ ಆಳ್ವ ಅವರನ್ನು ದೂಡಿರುವುದು ಕಾಂಗ್ರೆಸ್ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಕೊಡುತ್ತಿರುವ ಕೊಡುಗೆ ಎಂದು ವ್ಯಾಖ್ಯಾನಿಸಬಹುದೇ ? ಗಾಂಧಿ ಕುಟುಂಬದ ಧೋರಣೆಯನ್ನು ಈ ಹಿಂದೆ ಪ್ರಶ್ನಿಸಿದ್ದಕ್ಕಾಗಿ ಈ ಕೊಡುಗೆಯೇ? ಎಂದು ಕೇಳಿದೆ.