ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ನಾಳೆ ಬೆಳಿಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಲಿದ್ದಾರೆ.
ಸಚಿವ ಈಶ್ವರಪ್ಪ ವಿರುದ್ಧ ಕೆರಳಿ ಕೆಂಡವಾಗಿರುವ ಕಾಂಗ್ರೆಸ್, ಈಗಾಗಲೇ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದೆ. ಆದಾಗ್ಯೂ ಸರ್ಕಾರ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಭಟನೆ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಧರಣಿಗೆ ಜಗ್ಗಲ್ಲ, ವಿವಾದ ಬೆಳೆಸಲು ಇಷ್ಟವಿಲ್ಲ, ರಾಷ್ಟ್ರಧ್ವಜ ಕುರಿತ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ: ಈಶ್ವರಪ್ಪ
ಈ ನಿಟ್ಟಿನಲ್ಲಿ ನಾಳೆ ಬೆಳಿಗ್ಗೆ 7 ಗಂಟೆಗೆ ಬಿಜೆಪಿ ರಾಜ್ಯ ನಾಯಕರು ಸಭೆ ನಡೆಸಲಿದ್ದು, ಸಚಿವ ಈಶ್ವರಪ್ಪ ಬಗ್ಗೆ ಚರ್ಚೆ, ಕಾಂಗ್ರೆಸ್ ಪ್ರತಿಭಟನೆಗಳಿಗೆ ಪ್ರತಿತಂತ್ರ ರೂಪಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರುಗಳು ಭಾಗವಹಿಸಲಿದ್ದಾರೆ.