ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಜನರಿಗೊಂದು ಕಾನೂನು, ಕಾಂಗ್ರೆಸ್ ಗೊಂದು ಕಾನೂನು ಇದೆಯಾ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದ ಕಾನೂನು, ಸಂವಿಧಾನ ಒಂದು ಮನೆತನಕ್ಕೆ ಮಾತ್ರ ಸಂಬಂಧವಿಲ್ಲ ಎಂದರೆ ಹೇಗೆ ? ಜನತಂತ್ರ ವ್ಯವಸ್ಥೆಯಲ್ಲಿ ಹೀಗೆ ಪ್ರತಿಭಟನೆ ಮಾಡಿದರೆ ಕಾಯ್ದೆ, ಕಾನೂನಿಗೆ ಏನು ಬೆಲೆ ಕೊಟ್ಟಂತಾಗುತ್ತದೆ ? ಒಂದುಕಾಲು ಶತಮಾನದಷ್ಟು ಹಳೆಯ ಪಕ್ಷ ನಡೆದುಕೊಳ್ಳುವ ರೀತಿಯೇ ಇದು ? ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಜಾಸ್ತಿಯಾಗಿದೆ. ಈಗಾಗಲೇ ಎರಡು ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಹಿಂದೆಯೂ ಕೋವಿಡ್ ವೇಳೆ ಪ್ರತಿಭಟನೆ ನಡೆಸಿದರು. ಈಗಲೂ ಕೋವಿಡ್ ಸಂದರ್ಭದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ನವರ ಗುಲಾಮಿತನದ ಸಂಕೇತ. ವಿಚಾರಣೆಗೆ ಕರೆದಿದ್ದರೆ ಹೋಗಿ ವಿಚಾರಣೆ ಎದುರಿಸಬೇಕು ಅದನ್ನು ಬಿಟ್ಟು ಪ್ರತಿಭಟನೆ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.