ನವದೆಹಲಿ: ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಹೊಸ ಪಕ್ಷ ರಚನೆಗೆ ಸಿದ್ಧತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಸುದೀರ್ಘವಾಗಿ ಆರೋಪ ಮಾಡಿರುವ ಗುಲಾಂ ನಬಿ ಆಜಾದ್, ಹಿರಿಯ ನಾಯಕರ ಅನುಭವ, ಅಭಿಪ್ರಾಯಗಳನ್ನು ರಾಹುಲ್ ಕಡೆ ಗಣಿಸಿದ್ದಾರೆ. ಅಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಗಾಂಧಿ ಕುಟುಂಬದ ಬಗ್ಗೆ ಗೌರವವಿದೆ. ಆದರೆ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದು, ಅನುಮತಿಗಾಗಿ ಕಾಯುತ್ತಿದ್ದೇನೆ. ನನ್ನದೇ ಹೊಸ ಪಕ್ಷವನ್ನು ಕಟ್ಟುತ್ತೇನೆ. ನನ್ನ ಪಕ್ಷ ಜಮ್ಮು-ಕಾಶ್ಮೀರಕ್ಕೆ ಮಾತ್ರ ಸೀಮಿತವಲ್ಲ. ಜಮ್ಮು-ಕಾಶ್ಮೀರಕ್ಕೆ ಹೋಗಿ ಹೊಸ ಪಕ್ಷ ಆರಂಭಿಸಲಿದ್ದು, ನಂತರ ರಾಷ್ಟ್ರ ರಾಜಕರಣದ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಅಥವಾ ಇನ್ನಾವುದೇ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿರುವ ಗುಲಾಂ ನಬಿ ಆಜಾದ್, ನಾನು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗುಲಾಂ ನಬಿ ಆಜಾದ್ ಕಾಂಗ್ರೆಸ್ ತೊರೆದು ಹೊಸ ಪಕ್ಷದ ರಚನೆ ಮೂಲಕ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.